ಪಾಠಗಳು
ಶಾಲಾ ಕಾಲೇಜುಗಳಂಥ ಶಿಕ್ಷಣ ಸಂಸ್ಥೆಗಳ ದೈನಂದಿನ ಕಾರ್ಯಕ್ರಮಗಳಲ್ಲಿ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ (ಪೀರಿಯೆಡ್) ಬೋಧಿಸಲು ಅಥವಾ ಕಲಿಯಲು ಅನುಕೂಲಿಸುವಂತೆ ಪಠ್ಯ ವಿಷಯವನ್ನು ವಿಭಾಗಿಸಿ ವಿಂಗಡಿಸಿರುವ ಜ್ಞಾನ ಅಥವಾ ಕೌಶಲ್ಯದ ಒಂದು ತುಕಡಿ. ಇದರ ಪರಿಮಾಣ ನಿಗದಿಮಾಡಿರುವ ಕಾಲಾವಧಿಯ ಪರಿಮಾಣವನ್ನನುಸರಿಸಿ ವ್ಯತ್ಯಾಸವಾಗುತ್ತದೆ. ಈ ಕಾಲಾವಧಿ ಕೆಳಗಿನ ಹಂತದ ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆಯಾಗಿಯೂ ಮೇಲಕ್ಕೆ ಹೋದಂತೆ ಹೆಚ್ಚುತ್ತಲೂ ಹೋಗುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಇದು ಅರ್ಧ ಗಂಟೆಯಾಗಿದ್ದರೆ, ಕಾಲೇಜುಗಳಲ್ಲಿ ಒಂದು ಗಂಟೆಯದಾಗಿರುತ್ತದೆ. ಅಲ್ಲದೆ ಸಂಗೀತ, ಗೃಹವಿಜ್ಞಾನ, ಪ್ರಯೋಗ ವಿಜ್ಞಾನ, ಮನಃಶ್ಯಾಸ್ತ್ರ, ಭೂಗೋಳ, ಮುಂತಾದ ಪಾಠಗಳಲ್ಲಿ ಮುಖ್ಯವಾಗಿ ಪ್ರಯೋಗ, ಅಭ್ಯಾಸ ಅಥವಾ ಕಾರ್ಯನಿರ್ವಹಣೆ ಮುಖ್ಯವಾದ ವ್ಯಾಸಂಗಭಾಗವಾಗಿರುವುದರಿಂದ ಆ ವಿಷಯಗಳ ಪ್ರಯೋಗ ಪಾಠಗಳ ಕಾಲಾವಧಿ 1ಳಿ, 2 ಅಥವಾ 3 ಗಂಟೆಗಳ ವರೆಗಿರುತ್ತದೆ. 

ಪಠ್ಯ ವಿಷಯವನ್ನು ಪಾಠಗಳಾಗಿ ವಿಂಗಡಿಸಿರುವುದರಿಂದ ಬೋಧಿಸಲು ಕಲಿಯಲು, ಅಗತ್ಯವೆನಿಸುವ ವ್ಯವಸ್ಥೆಯನ್ನು ಮಾಡಿಕೊಂಡಂತಾಗುತ್ತದೆ. ಈ ವ್ಯವಸ್ಥೆ ಕೆಳಗಿನ ಅಂತಸ್ತಿನ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಮನಸ್ಸಿನ ವ್ಯಾಪಾರ ಮತ್ತು ಆಸಕ್ತಿಗಳನ್ನನುಸರಿಸಿ ರೂಪುಗೊಳ್ಳಬೇಕಾಗುತ್ತದೆ. ಉನ್ನತ ಸಂಸ್ಥೆಗಳಲ್ಲಾದರೋ ತಾರ್ಕಿಕ ಸ್ವರೂಪದ್ದಾಗಿರಬೇಕಾಗುತ್ತದೆ. ಹೇಗೆ ವ್ಯವಸ್ಥೆಗೊಂಡಿರಲಿ ಪಾಠಗಳು ಪಠ್ಯ ವಿಷಯವನ್ನು ಗೊತ್ತುಮಾಡಿರುವ ಕಾಲಾವಧಿಯಲ್ಲಿ ಬೋಧಿಸಿ ಮುಗಿಸಲು ಸಾಧ್ಯವಾಗುವಂತಿರಬೇಕು. 

ಪಾಠಗಳಲ್ಲಿ ಹಲವು ಬಗೆಗಳಿವೆ. ಮಾದರಿ ಪಾಠಗಳಲ್ಲಿ ಬೋಧಕರೇ ಹಂತಹಂತವಾಗಿ ವಿಷಯ, ಪ್ರಯೋಗ ಮುಂತಾದವನ್ನು ಪ್ರದರ್ಶಿಸಿ, ವಿಷಯದ ಸರಿಯಾದ ಜ್ಞಾನವನ್ನು ಅಥವಾ ಕ್ರಿಯೆಗಳಲ್ಲಿ ನೈಪುಣ್ಯವನ್ನು ದೊರಕಿಸುವರು. ಓದುವುದು, ಹಾಡುವುದು, ಸಂಗೀತ, ವಾದ್ಯಗಳನ್ನು ನುಡಿಸುವುದು, ನೃತ್ಯ ಆಟಗಳು, ಕುದುರೆ ಸವಾರಿ, ಈಜುವುದು, ಹೊಲಿಗೆ, ಮರಗೆಲಸ, ವಿವಿಧ ಆಯುಧಗಳನ್ನು ಪ್ರಯೋಗಿಸುವುದು, ಯಂತ್ರಗಳನ್ನು ನಡೆಸುವುದು ಇತ್ಯಾದಿಗಳ ಬೋಧನೆಯೆಲ್ಲವೂ ಮೊದಲು ಮಾದರಿ ಪಾಠಗಳಿಂದಲೇ ನಡೆಯುತ್ತವೆ. ಸಲಕರಣೆಗಳನ್ನು ಸಿದ್ಧಪಡಿಸಿಕೊಂಡು ಪ್ರಯೋಗಗಳನ್ನು ಮಾಡಿ, ಕೆಲವು ವೇಳೆ ವಿದ್ಯಾರ್ಥಿಗಳಿಂದಲೂ ಮಾಡಿಸಿ, ಸಮಸ್ಯೆಗೆ ಉತ್ತರವನು ದೊರಕಿಸುವುದು, ಪ್ರಯೋಗರೀತಿಯ ಪಾಠಗಳಾಗುತ್ತವೆ. 

ಮಕ್ಕಳೊಡಗೂಡಿ ಹೊರಸಂಚಾರದ ಪ್ರತ್ಯಕ್ಷಾನುಭವಗಳ ಮೂಲಕ ಮಕ್ಕಳು ವಿಷಯಗಳನ್ನು ತಿಳಿದುಕೊಳ್ಳುವಂತೆ ಮಾಡುವ ಕಾರ್ಯಕ್ರಮ ಯೋಜನೆಯ ಪಾಠಗಳ (ಪ್ರಾಜೆಕ್ಟ್) ವರ್ಗಕ್ಕೆ ಸೇರುತ್ತದೆ.

ಕಲಿಯಬೇಕಾದ ಕೌಶಲ್ಯದಲ್ಲಿ ನೈಪುಣ್ಯ ಸಾಧಿಸುವಂತೆ ಮಾಡಲು ಪುನರಾವರ್ತನೆ ಅಗತ್ಯ. ಅಂಥ ಪಾಠಗಳನ್ನು ಅಭ್ಯಾಸ ಪಾಠಗಳು ಎನ್ನುವುದಿದೆ. ರಸಾಸ್ವಾಧನೆಯೆ ಮುಖ್ಯ ಉದ್ದೇಶವಾಗುಳ್ಳ ಸಾಹಿತ್ಯ ಕೃತಿಗಳು, ರಸಗ್ರಹಣ ಅಥವಾ ಸೌಂದರ್ಯ ಬೋಧೆಯ ಪಾಠಗಳೆನಿಸುತ್ತವೆ.
(ಎಸ್.ಎಸ್.ಕೆಯು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ